Tuesday, November 17, 2009

Java program - ಕನ್ನಡದಲ್ಲಿದ್ರೆ

/*
* ಈ ಕಾರ್ಯಕ್ರಮವು ಫಿಬೋನಸಿ ಸರಣಿಯ ಮೊದಲ ೨೦ ಅಂಕೆಗಳನ್ನು ಮುದ್ರಿಸುತ್ತದೆ
*/

ಸಾರ್ವಜನಿಕ ವರ್ಗ ಫಿಬೋನಸಿ {
ಸಾರ್ವಜನಿಕ ಜಡ ಖಾಲಿ ಪ್ರಮುಖ (ತಂತಿ[] ನಿಯತಾಂಕ) {
ಇಡೀ ಈಗಿನ, ಹಿಂದಿನ=೧, ಹಿಂದಿಂದಿನ=೦;
ಆಗಿ ( ಇಡೀ ಐ = ೦; ಐ < ೨೦; ಐ ++) {
ಈಗಿನ = ಹಿಂದಿನ + ಹಿಂದಿಂದಿನ;
ವ್ಯವಸ್ಥೆ.ಹೊರಗೆ.ಮುದ್ರಿಸುಗೆರೆ( ಈಗಿನ + " ");
ಹಿಂದಿಂದಿನ = ಹಿಂದಿನ;
ಹಿಂದಿನ = ಈಗಿನ;
}
ವ್ಯವಸ್ಥೆ.ಹೊರಗೆ.ಮುದ್ರಿಸುಗೆರೆ();
}
}

Monday, July 20, 2009

ಕಾರ್ಪೊರೇಟ್ ಸೂರ್ಯ

ಹುಣ್ಣಿಮೆಯ ಚಂದಿರನು ಕಳೆಬರದಂದದಿ ಕಡಲಲೆಗಳ ಮೇಲೆ ತೇಲುತಿರಲು
ಅಂತರಾಳದ ದುಃಖ ಉಕ್ಕಿ ಹರಿವ ಹೊನಲು
ಭೋರ್ಗರೆವ ಸಮುದ್ರದಲೆಗಳ ರುದ್ರತಾಂಡವ ತುಳಿತದಲಿ
ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿ ಮಾಯವಾಗುವ ನಿರಾಸಕ್ತಿಯ ಚುಕ್ಕಿಗಳು

ಕಡಲ ಒಡಲಿಂದಲೆಗಳು ದಡಕೆ ನನ್ನೆಡೆಗೆ ಆದರದಿ ಬರುತಿರಲು
ದುಃಖದಿಂದೊಮ್ಮೆಲೆಗೆ ಕ್ಷಣಿಕ ಮುಗುಳುನಗೆಯು
ಮರುಕ್ಷಣವೇ ಹಿಂದಿರುಗಿದಲೆಗಳು ಜಲರಾಶಿಯೆಡೆ ಮುಖಮಾಡಿ
ಪ್ರಭಾವಳಿಯಂತಿರುವ ಸುಖದ ಮಧ್ಯದಲಿ ಮತ್ತೆ ಮೌನ ದುಗುಡವು

ಒಮ್ಮಿಂದೊಮ್ಮೆಲೆಲ್ಲೆಡೆಯು ಅಜ್ಞಾನದಂದಕಾರವು ಆವರಿಸಲು
ದಾರಿಕಾಣದೆ ನೊಂದು ಬೇಸತ್ತ ಮನವು
ದೂರದಲ್ಲೊಮ್ಮೆ ಗೋಚರಿಸಿದ ಕಿಡಿಯ ಹಿಡಿಯಲು ಹೋಗಿ
ಗಾದೆಮಾತಿನ ಸತ್ಯಾಂಶದರಿವಾಗಿ ಅಲ್ಲೊಮ್ಮೆ ಪುನಃ ಸೋಲು

ಸೋಲು ಗೆಲುವಿನ ಸೋಪಾನ, ಸೋತವನೇ ನಿಜವಾದ ವಿಜೇತ
ಸೋತವನೇ ಬಲ್ಲವನು ಪ್ರಪಂಚದ ವಿಸ್ತೀರ್ಣವನು
ಎಂದು ನಿಟ್ಟುಸಿರು ಬಿಟ್ಟು ದಿಟ್ಟ ಹೆಜ್ಜೆಯನಿಟ್ಟು ಕಳೆಬರವನೊಮ್ಮೆ
ಈಕ್ಷಿಸಲರಿವಾಯಿತದು ಉಡುರಾಜನಲ್ಲ ರವಿತೇಜನೆಂದು

Friday, July 17, 2009

ಕಾರ್ಪೊರೇಟ್ ಖದೀಮರು

ಮೊದಲದಿನ ಕಾತುರದಿ ಎಲ್ಲರಿಂದಾಗಮನ
ಕುಲುಕುವರು ಕೈಗಳನು ಮುಗುಳುನಗೆ ಬೀರುತಲಿ
ಸ್ವಾಗತವು ಆದರದಿ ಹವೆಯೂ ನಿಯಂತ್ರಿತ
ಸಿಲುಕಿಸಲು ಸಿಹಿಯೊಡನೆ ಸರಳ ಬಂಧನವದು ಸ್ಥಿರ

ಆಸನವೋ ಸಿಂಹಾಸನವೋ ರಾಜಯೋಗವೋ ಒಳಗೆ
ಕತ್ತಲಲಿ ಮಿಂಚುಹುಳವು ಮಿನುಗುವಂದದಿ ದೀಪ
ಶುಭ್ರ ಕನ್ನಡಿಯಂತೆ ಚಿಲುಮೆ ಶೌಚಾಲಯವು
ಸ್ವಚಾಲಿತ ಮೆಟ್ಟಿಲುಗಳು ಹತ್ತು ಇಳಿವುದು ಬೇಡ

ಅಪರಾನ್ಹ ಭೋಜನದಿ ವಿವಿಧ ಭಕ್ಷಗಳೇನು
ಭಾರತವು ಒಂದೆಂದು ದಕ್ಷಿಣೋತ್ತರದಡಿಗೆ
ಸಂಜೆ ಎಂಬುದೆ ತಡವು ಪಾನಗಳು ಕಾದಿಹವು
ಕತ್ತಲಾಯಿತು ಈಗ ಮನೆಗುಂಟ ವಾಹನವು

ದಿನಗಳುರುಳಿತು ಹೀಗೆ ದಿಷೆಯು ತಿರುಗಿತು ಹಾಗೆ
ಒತ್ತಡವು ಒಂದೆಡೆಯು ಉಳಿದೆಲ್ಲ ಗುಟ್ಟು ಗುಮ್ಮಾನಗಳು
ಹಗೆಯ ಹೊಗೆಯಲ್ಲೀಗ ಬಹುಕಷ್ಟ ಉಸಿರಾಟ
ಕೊನೆಗೂ ಕಾರಿದ ಕೆಂಡವದು ಎಂದೂ ನಂದದ ಜ್ವಾಲೆ

ದೊಡ್ಡ ತಲೆಗಳು ಸೇರಿ ಒಟ್ಟಾಗಿ ಕೋಣೆಯಲಿ
ಬೆರಳೆಲ್ಲ ಕುರಿಯೆಡೆಗೆ ಅಲ್ಲಿ ಬಲಿಪಶುವಿನ ಹೆಸರೇ
ಕಡೆಯ ಪಗಾರ ಚೇಟಿಗದು ನಾಂದಿಯಾಯಿತು ದಿನವು
ಕೃತಕ ಮಾತಿನಲಿ ಸಮಾಧಾನ ಕಡೆಗೂ ಮುಗುಳುನಗೆಯಲಿ ವಿಧಾಯ

Wednesday, July 30, 2008

ಮೋಜಿನ ಹಿಂಸೆ

"ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ" ಅಂತ ಕೇಳಿದ್ದೀವಿ ಆದರೆ ಅದರ ಅರ್ಥ ಮನವರಿಕೆ ಆಗಿರಲಿಲ್ಲ. ಬಾಲ್ಯದ ಅಜ್ಞಾನ ಮೋಜಿನ ನೆಪವೊಡ್ಡಿ ಕೀಟ ಜಗತ್ತಿಗೆ ಬಹಳ ಹಿಂಸೆ ಮಾಡಿದ್ವಿ. ಹಿರಿಯರಿಂದಲೂ ಕೆಲವು ಹಿಂಸೆಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ಇತ್ತು. ಉದಾಹರಣೆಗೆ ಖಾದ್ಯ ಪದಾರ್ಥಗಳಲ್ಲಿ ಇರುವೆ ಇದ್ದರೆ ಅದನ್ನ ಬಿಸಿಲಲ್ಲಿ ಇಟ್ಟು ಹಿಂಸಿಸುವುದು, ಜಿರಳೆಗಳನ್ನು ಪೊರಕೆ ಇಂದ ಹೊಡೆದು ಸಾಯಿಸುವುದು ಅಥವಾ ವಿಷಲೆಪಿತ ಸಕ್ಕರೆಯನ್ನ ಕೀಟನಾಶಕದಂತೆ ಉಪಯೋಗಿಸುವುದು, ಇಲಿಗಳಿಗೂ ಇದೇ ರೀತಿ ಮೃತ್ಯುವಿಗೆ ಆಹ್ವಾನ ನೀಡುವುದು. ಜೇಡರ ಹುಳಕ್ಕಂತೂ ಉಳಿಗಾಲವಿಲ್ಲ. ಸೊಳ್ಳೆಗಳಿಗೆ ನಿರ್ದಾಕ್ಕ್ಷಿಣ್ಯ ವಧೆ, ಕಂಡಲ್ಲಿ ಗುಂಡು. ಇವೆಲ್ಲಕ್ಕೂ ತನ್ನದೇ ಆದ ಸಮರ್ಥನೆ. ನಮ್ಮ ಮನೆಯಲ್ಲೇ ಇದ್ದು, ನಮಗೆ ತೊಂದರೆ ಕೊಡುತ್ತೆ ಅನ್ನೋ ನೆವ.

ತನ್ಮುಖೇಣ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಹಿಂಸೆಯ ಬೀಜ ಬಿತ್ತುವುದು. ಹೀಗಾಗಿ ಅವರಿಗೆ ಅಹಿಂಸೆಯ ಮಹತ್ವದ ಪರಿಚಯವನ್ನೇ ಮಾಡಿಸಲ್ಲ. ಹಿಂಸೆಯನ್ನು 'ನಮ್ಮ ತೊಂದರೆಯ ನಿವಾರಣೆಗಾಗಿ' ಮಾಡಿದರೇನು ಅಥವಾ 'ಮೊಜಿಗೆ' ಮಾಡಿದರೇನು? ಒಟ್ಟಿನಲ್ಲಿ ಹಿಂಸೆಗೆ ವಿರೋಧವಿಲ್ಲ ಎಂಬ ಭಾವನೆಯಿಂದ, ನಮಗೆ ಒಂದಿಷ್ಟೂ ತೊಂದರೆ ಕೊಡದ ಜೀವ ಸ೦ಕುಲವನ್ನೂ ಪೀಡಿಸುತ್ತಾ ಇದ್ವಿ.

ಭೂತ ಕನ್ನಡಿಯ ದುರುಪಯೋಗ ಮಾಡಿ ಸೂರ್ಯನ ಬೆಳಕನ್ನು ಒಂದು ಬಿಂದುವಾಗಿ ಕೇಂದ್ರೀಕರಿಸಿ ಅದನ್ನ ಇರುವೆ ಮೇಲೆ ಬಿಡುತ್ತಿದ್ದೆವು. ಬಣ್ಣದ ಚಿಟ್ಟೆಗಳನ್ನು ಹಿಡಿಯುತ್ತಿದ್ದೆವು. ದೊಡ್ಡ ಚಿಟ್ಟೆಗಳು ಇಲ್ಲದ ಋತುವಿನಲ್ಲಿ, ಹುಲ್ಲಿನ ಮೇಲೆ ಹಾರಾಡುವ ಚಿಕ್ಕ ಚಿಟ್ಟೆಗಳು ಬಲಿಯಾಗುತ್ತಿತ್ತು. Dragonfly (ಏರೋಪ್ಲೇನ್ ಚಿಟ್ಟೆ)ಗೆ ವಿಧ ವಿಧವಾದ ಚಿತ್ರಹಿಂಸೆ. ಅದರ ಬಾಲಕ್ಕೆ ದಾರ ಕಟ್ಟಿ ಹಾರಿಸುವುದು. ಒಂದೇ ದಾರದ ಇಬ್ಬದಿಗೆ ಎರಡು ಚಿಟ್ಟೆಗಳನ್ನು ಕಟ್ಟಿ ಅವುಗಳ ಅಸಹಾಯಕತೆ ಕಂಡು ನಲಿದಾಡುವುದು. ಹಾರಾಡುವ ಚಿಟ್ಟೆಗಳಿಗೆ ಪರ್ಥೇನಿಯ೦ ಗಿಡದಿಂದ ಹೊಡೆದು ನೆಲಕ್ಕುರುಳಿಸುವುದು. ಅವುಗಳ ಸೂಕ್ಷ್ಮ ರೆಕ್ಕೆಗಳನ್ನು ಹಿಡಿದು ಸೊಳ್ಳೆಗಳನ್ನು ತಿನ್ನುಸುವುದು !!! ಜೀರ್ಜಿಂಬೆ (ಬೋರಂಗಿ) ಹುಳನ ಬೆಂಕಿಪೋಟ್ಟಣದಲ್ಲಿಟ್ಟು ಸಾಕುವ ನೆಪದಲ್ಲಿ ಸಾಯಿಸುವುದು. ಮಳೆಗಾಲದಲ್ಲಿ ಭೂಮಿಯಿಂದ ಹೊರಬರುವ ಕೆಂಪು ಬಣ್ಣದ ವೆಲ್ವೆಟ್ ಹುಳಗಳನ್ನೂ ಬೆಂಕಿಪೊಟ್ಟಣದಲ್ಲಿ ಹಾಕಿ ಜೊತೆಗೆ ಹುಲ್ಲಿನ ಹಾಸಿಗೆ ಮಾಡಿ ವಾತಾಯನ ವ್ಯವಸ್ಥೆಗೆ ಮೇಲೊಂದು ರಂದ್ರ ಮಾಡಿ ಇಡುತ್ತಿದ್ದೆವು. ಅವುಗಳಿಗೆ ಓಟದ ಪಂದ್ಯ ಆಯೋಜನೆ ಖುಷಿ ತರುತ್ತಿತ್ತು. ಆದರೆ ಮರುದಿನ ಎಲ್ಲವು ಡೆಡ್. ಮಿಡತೆ, ದುಂಬಿ ಇತ್ಯಾದಿ ಮನೆಯೊಳಗೆ ಬಂದರೆ ರೊಟ್ಟು (card board) ಇಂದ ಹೊಡೆದು ಹೊರಗಟ್ಟುತ್ತಿದ್ದೆವು. ಒತೆಕ್ಯಾತಗಳನ್ನು ಗುರಿ ಅಭ್ಯಾಸಕ್ಕಾಗಿ ( target practice)ಉಪಯೋಗಿಸುತ್ತಿದ್ದೆವು. ಅವುಗಳ ಬೆನ್ನಟ್ಟಿ ಕಲ್ಲಿನಿಂದ ಹೊಡೆದು ಸಾಯಿಸುವುದು.

ಒಂದು ವಿಪರ್ಯಾಸವೆಂದರೆ ಭಯಾನಕ ಹುಳಗಳಾದ ಖಣಜ, ಹೆಜ್ಜೇನು, ಗೊದ್ದ(ದಪ್ಪ ಇರುವೆ) ಇವುಗಳನ್ನು ಕುರಿತು ಕಾಲಕಾಲಕ್ಕೆ ಹಿರಿಯರಿಂದ ಮುನ್ನೆಚ್ಚರಿಕೆ ಸಿಗುತ್ತಿತ್ತು. ಕಾರಣ? ಅವುಗಳಿಂದ ನಮಗೆ ಭಾದೆಯಾಗುತ್ತದೆ ಅಂತ. ಭಾದೆ ಎಲ್ಲರಿಗೂ ಒಂದೇ ಅಲ್ವಾ?

ಮೊನ್ನೆ ಏನಾಯಿತು ಗೊತ್ತ? ... ಸೇವೆಯಿಂದ ನಿವೃತ್ತ ಆಗಿರುವ ಒಬ್ಬ ಮುದುಕ, ಮನೆಯಲ್ಲಿದ್ದ ತ್ಯಾಜ್ಯ ರವೆಯನ್ನು ರಸ್ತೆ ಬದಿಯ ಇರುವೆ ಗೂಡುಗಳ ಪಕ್ಕದಲ್ಲಿ ಚೆಲ್ಲುತ್ತಿದ್ದ. ನಾನು ಅವನನ್ನು ಒಮ್ಮೆ ವ್ಯಂಗ್ಯ ದೃಷ್ಟಿಯಿಂದ ನೋಡಿದೆ. ಎಲ್ಲ ಜೀವಿಗಳಿಗೂ ಅದರ ಆಹಾರ ಹೇಗೆ ಹುಡುಕಬೇಕು ಅಂತ ಗೊತ್ತಿರತ್ತೆ. ಆಹಾರ ಅದರ ಬಾಯಿಗೆ ತುರುಕುವ ಅವಶ್ಯಕತೆ ಇಲ್ಲ. ಬದಲಿ ಆ ಮುದುಕ ತನ್ನ ಸಮಯವನ್ನು ಜನಜಾಗೃತಿಗೆ ಬಳಸಿ ತನ್ನ ಮನೆಯಲ್ಲಿರುವ ಬಾಲಕರಿಗೆ, ಅವರ ಸ್ನೇಹಿತರಿಗೆ ಅಹಿಂಸೆಯ ಮಹತ್ವವನ್ನು ತಿಳಿಸಿ, ಮಕ್ಕಳ ಮನಸ್ಸು ನಾಟುವಂತೆ ಇವನ್ನೆಲ್ಲ ಕಥೆಯ ರೂಪದಲ್ಲಿ ಹೇಳಿ ಮನವರಿಕೆ ಮಾಡಿಸಿ, "ನೀವು ಬಾಳಿ, ಬದುಕಲೂ ಬಿಡಿ" ಸಿದ್ಧಾಂತದ ಸೂಕ್ಷ್ಮತೆಯನ್ನು ತಿಳಿಹೇಳಬಹುದು. ಈ ಸಿದ್ದಾಂತದ ಬುನಾದಿಯಲ್ಲಿ ಬೆಳೆದ ಬಾಲಕರು ಮುಂದೆ ಉತ್ತಮ ಪ್ರಜೆಗಲಾಗುವ ಸಾಧ್ಯತೆಗಳು ಹೆಚ್ಚಾಗಿರತ್ತೆ.

ನೋಡು ಶಿಷ್ಯ ನಿನಗಂತೂ ಮನುಷ್ಯತ್ವ ಇಲ್ಲ, ನೀನು ಬುಲ್ ಡಾಗ್. ಮನುಷ್ಯತ್ವ ಇರುವವರು ಈ ರೀತಿ ಅಮಾಯಕ ಜೀವಿಗಳನ್ನು ಹಿಂಸಿಸಬಾರದು ಅಷ್ಟೆ.

Thursday, July 24, 2008

ಜೋವಿಯಲ್ ಕೋಡೇಶ್ವರಿ (ಕಾಲ್ಪನಿಕ)

ಆದಿನ ಎಂದಿನಂತೆ ನಾನು ಆಫೀಸ್ ಗೆ ಬಂದೆ. ಆದ್ಯತೆಯ ಕೆಲಸ ಫಲಹಾರ ಆಯಿತು. ಆಗಲೇ ಆಲಸ್ಯ ಕೈಬೀಸಿ ಕರಿತಾಇತ್ತು. ನಿರಾಸಕ್ತಿ ಇಂದ ಕ್ಯುಬಿಕ್ಯಾಲ್ ಕಡೆ ಹೆಜ್ಜೆ ಹಾಕಿ ergonomic ಕುರ್ಚಿನ ಅಲಂಕರಿಸಿದೆ. ಒಂದು ಬಾರಿ ಪ್ರಾದೇಶಿಕದಿಂದ ಹಿಡಿದು ಅಂತರರಾಷ್ಟ್ರೀಯ ವಾರ್ತೆಗಳವರೆಗೆ ಕಣ್ಣು ಹಾಯಿಸಿ ಇನ್ನೇನು ಕಾರ್ಯನಿರತನಾಗಕ್ಕೆ ಹೊರಟೆ, ತೂಕಳಿಸುವವರಿಗೆ ಹಾಸಿಗೆ ಹಾಸಿಕೊಟ್ಟಹಾಗೆ ದುರಾದೃಷ್ಥವಶಾತ್ ಕೆಲಸಕ್ಕೆ ಸಂಭಂದಪಟ್ಟ ಒಂದೂ e-mail ಬಂದಿರಲಿಲ್ಲ. ಇನ್ಬೋಕ್ಸಿನಲ್ಲಿ ಸ್ಮಶಾಣಮೌನ. ಒಮ್ಮೆ ಧೀರ್ಗವಾಗಿ ಶ್ವಾಸ ತೆಗೆದುಕೊಂಡೆ. ಅಷ್ಟರಲ್ಲಿ ಹಿಂಬದಿಯಿಂದ ಮೂಡಿದ ಹೈ ಹ್ಯೀಲ್ಸ್ ಶಬ್ದ ನನ್ನ ಗಮನವನ್ನು ಆಕಡೆಗೆ ಸೆಳೆಯಿತು.

ಘಾ೦ಭೀರ್ಯ ನಡುಗೆಯ ಠೀವಿಯಿ೦ದ ಜೋವಿಯಲ್ ಕೋಡೇಶ್ವರಿ, ತಂತ್ರಾಂಶ ರಚನಾ ಪ್ರವೀಣೆ ತನ್ನ ಕ್ಯುಬಿಕ್ಯಾಲ್ ಕಡೆ ಸಾಗಿದ್ದಳು. ಅಂದು ಗುರುವಾರ ತಂತ್ರಾಂಶ ಬಿಡುಗಡೆಯ ಹಿಂದಿನ ದಿನವಾದ್ದರಿಂದ ಒಂದೂ ನಿಮಿಷವನ್ನೂ ವ್ಯವ ಮಾಡದೆ ಕಾರ್ಯ್ಯೋನ್ಮಘ್ನಳಾದಳು. ಆಗ ಹವಾನಿಯಂತ್ರಕ ತಂಪಾದ ಗಾಳಿಯನ್ನು ಚಾವಣಿಯಿಂದ ಬೀಸುತಿತ್ತು. ಕೀಲಿಮಣೆಗಳಮೇಲೆ ತನ್ನ ನೀಳವಾದ ಬೆರಳುಗಳು ನಿರಾತಂಕವಾಗಿ ಸುಳಿದಾಡುತ್ತಿದ್ದವು. ಬೆರಳಂಚಿಗೆ ಹಚ್ಚಿದ್ದ ಪಾರದರ್ಷಕವಾದ ಇಂಪೋರ್ಟೆಡ್ ಉಗುರುಬಣ್ಣದಲ್ಲಿ LCD ಮಾನಿಟರ್ ನಲ್ಲಿ ಪ್ರತಿಬಿಂಭಿತವಾಗುತಿತ್ತು. ಆಗತಾನೆ ವೆಂಡಿಂಗ್ ಯಂತ್ರದಿಂದ ಮಿಶ್ರಣವಾಗಿ ಬಂದ ತತ್ಕಾಲಿಕ ಕಾಫಿ ಮೇಜಿನ ಒಂದು ಮೂಲೆಯಿಂದ ನಿರಂತರವಾಗಿ ಸುವಾಸನೆಯನ್ನು ಸೂಸುತಿತ್ತು. ಎಲ್ಲ ಮೆಸೆಂಜರ್ ಗಳಲ್ಲಿ ವಿವಿಧ ರೀತಿಯ ಕಾರ್ಯನಿರತ ಸೂಚನಾಫಲಕಗಳು (busy, not at my desk, do not disturb) ರಾರಾಜಿಸುತಿದ್ದವು. ಇವೆಲ್ಲವುಗಳ ನಡುವೆ ತಾಂತ್ರಿಕ ಬರಹಗಾರ್ತಿ ಪ್ರಿ೦ಸ್ಟನ ಪ್ರೀತಿ ಕಿವಿಗಳಿಗೆ ಹ್ಯಾಂಡ್ಸ್ ಫ್ರೀ ತೊಟ್ಟು ತನ್ನ ಪ್ರಿಯತಮನೊಡನೆ ಲಲ್ಲೆ ಹೊಡೆಯುತ್ತಿದ್ದಳು. ಇನ್ನೊಂದು ಬದಿಯ ಕ್ಯೂಬಿಕಲ್ ನಲ್ಲಿ ಬೇರೊಂದು ಪ್ರಾಜೆಕ್ಟ್ ನ TL ಸ್ವಾತಿ ಕಛೇರಿಯ ಉಚಿತ ಫೋನಿನಿಂದ ತನ್ನ ಹಳೆಯ ಸಂಸ್ಥೆಯ ಸಹಪಾಠಿಯನ್ನು form 16 ಕುರಿತು ವಿಚಾರಿಸುತಿದ್ದಳು. ಟೆಸ್ಟಿಂಗ್ ತಂಡದ ಸಂಪನ್ಮೂಳಗಳೆಲ್ಲ ಆಗಲೇ ಪ್ಯಾಕ್ಕಪ್ ಮಾಡಿ ವೀಕೆಂಡ್ ಪ್ಲ್ಯಾನ್ ಹಾಕುತ್ತಿದ್ದರು. ಸೀತಾರಾಮ ರೆಡ್ಡಿ ನಾಲ್ಕನೇ ಬಾರಿ Alt + Ctrl + Del ಪ್ರೆಸ್ ಮಾಡಿ ವಾಶ್ ರೂಮ್ ಕಡೆ ಹೆಜ್ಜೆ ಹಾಕಿದ್ದ. ಮಾರ್ಗಮಧ್ಯದಲ್ಲಿ ರೆಸಿಪ್ಶನಿಶ್ಟ್ ಜೆಸ್ಸಿಕಾ ಗೆ ಮಂದಹಾಸ ಬೀರ್ತಾ ಇದ್ದ. ಅವಳೋ ಮೊದಲೇ ಮಂದಸ್ಮಿತೆ, ಅವಳ ಮುಖದಲ್ಲಿ ಸ್ವಲ್ಪ north-eastern touch ಇತ್ತು. ಆದರೆ ಅವ್ಳು ಚಿಂಕಿ ಅಲ್ಲ. ಅವರ ಪೂರ್ವಜರು ತ್ರಿಪುರದಿಂದ ವಲಸೆ ಬಂದವರು. ಆದರೂ ಕೆಲವೊಮ್ಮೋ ಅವಳು ತ್ರಿಪುರ ಸುಂದರಿಯಂತೆ ವರ್ತಿಸುತ್ತ ಇದ್ದಳು. ರೆಡ್ಡಿಯ smile ಇಂದ ಅವಳು ಇನ್ನಷ್ಟು ಮೇಲೇರಿದಳು. ವಾಶ್ ರೂಮ್ ಪಕ್ಕದ ಗಾಜನ್ನು ಆಫೀಸ್ ಬಾಯ್ ೧ ತಿಂಗಳ ಹಳೆಯ ದಿನಪತ್ರಿಕೆಯಿಂದ ಒರೆಸುತ್ತಿದ್ದ. ಇದ್ಯಾವುದನ್ನೂ ಲೆಕ್ಕಿಸದ ಜೋವಿಯಲ್ ಕೇಂದ್ರೀಕೃತ ಮನಸ್ಸಿನಿಂದ ಕೋಡಿಂಗ್ ನಲ್ಲಿ ಮಗ್ನಳಾಗಿದ್ದಳು.


ಜೋವಿಯಲ್ ಬಹಳ SIMPLE ಸರಳತೆಗೆ ಹೆಸರಾದವಳು. RELIABLE ಕೂಡ ಹೌದು, ಯಾವುದೇ ಕಾರ್ಯಾಚರಣೆಯನ್ನು ವಹಿಸಬಹುದೆಂಬ ನಂಬಿಕೆ PM ಪನೀರ್ ಸೆಲ್ವನಿಗೆ ಇತ್ತು. ಜೋವಿಯಲ್ ನ ಇನ್ನೊಂದು ಹೆಸರು ROBUST, ಎಂತಹ ಕಷ್ಟಕರ ಸ೦ಧರ್ಭವನ್ನೂ ನಿಭಾಯಿಸಬಲ್ಲವಳು. DISTRIBUTED ಮತ್ತು MULTITHREADED ಗುಣಗಳನ್ನು ಹೊಂದಿದ್ದ ಇವಳು ಏಕಕಾಲದಲ್ಲಿ ಹಲವು ಟ್ಯರ್ಮಿನಲ್ ಗಳಿಂದ ಗಣಕಯ೦ತ್ರವನ್ನು ನಿಯಂತ್ರಿಸಬಲ್ಲವಳು ಹಾಗು ತನ್ನ ಕೋಡ್ ಇತರರ ಉಪಯೋಗಕ್ಕೂ ಬರುವಂತೆ ಬರೆಯಬಲ್ಲ ಚಾಣಾಕ್ಷೆ. ಕಾಲೇಜು ದಿನಗಳಲ್ಲೇ ಯೂನಿಕ್ಸ್ ನ 1024 ಕಮ್ಯಾ೦ಡುಗನ್ನು ಭಗವತ್ ಗೀತೆಯಾ ೧೮ ಅಧ್ಯಾಯಗಳಂತೆ ಮನನ ಮಾಡಿದ್ದಳು, ಆದ್ದರಿಂದ PLATFORM INDEPENDENT. ಇವಳು ಪಾದರಸದಂತೆ ಚುರುಕು ಫುಲ್ DYNAMIC. ತನ್ನ ಎಲ್ಲ ಕೆಲಸಗಳನ್ನು SECURE ಆಗಿ ಮಾಡುತ್ತಾಳೆ. ಒಟ್ಟಿನಲ್ಲಿ ಕೋಡೇಶ್ವರಿ JAVA ದಂತೆ HIGH PERFORMANCE.

ಏನೇ ಇರಲಿ ಇಷ್ಟು ಸರಳತೆಯ ಮಧ್ಯೆಯೂ ಒಂದು ಲೆವೆಲ್ ಮೈನ್ಟೈನ್ ಮಾಡುತ್ತಾಳೆ. ಉಡುಗೆ ತೊಡುಗೆ ಪಾಶ್ಚಿಮಾತ್ಯ ಶೈಲಿ. ಹೈ ಹ್ಯೀಲ್ಸ್ ಇಲ್ಲದೆ ಒಂದು ಹೆಜ್ಜೆಯನ್ನೂ ಮುಂದಿಡುವಂತಿಲ್ಲ. ಆದರೂ ಸ೦ಸ್ಥೆಯ ವಸ್ತ್ರನಿಯಮಬಧ್ಧತಾ ಅನ್ವಯಿ. ಅತ್ಯಂತ brand conscious. ಅಲಂಕಾರದಲ್ಲೂ OBJECT ORIENTED. ಟಾಪ್ ನ ಬಣ್ಣದಿಂದ ಕಿವಿಯ ಹ್ಯಾಂಗಿಂಗ್ ತನ್ನ ಬಣ್ಣವನ್ನು INHERIT ಮಾಡಿರುತ್ತದೆ. ಹೆಗಲಿಗೆರಿಸುವ ಬ್ಯಾಗ್ ಮತ್ತು ಶೂ ಒಂದೇ ರೀತಿಯ ಚರ್ಮದ ಗುಣದಿಂದ ENCAPSULATE ಆಗಿರುತ್ತದೆ. ಇನ್ನು ಲಿಪ್ಸ್ಟಿಕ್ ಅಂತೂ POLYMORPHISM, ಒಂದು ದಿಕ್ಕಿನಿಂದ ನೋಡಿದರೆ ಜೆಲ್ ಮಿನುಗುತ್ತದೆ, ಮತ್ತೊಂದು ಕೋನದಿಂದ ಅದರ ಬಣ್ಣವೇ ಬೇರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆಕೆಯಲ್ಲಿ ಒಂದು ಬಗೆಯ COMMON ABSTRACTION ಕಾಣಬಹುದು. ಅದು ಹೀಗೆ, ಒಂದು ನಿಗದಿತ ದಿನದಲ್ಲಿ ಎಲ್ಲ ಉಡುಗೆ ತೊಡುಗೆಗಳು ಒಂದೇ Entity ಯಿಂದ Abstract ಮಾಡಲಾಗಿರುತ್ತದೆ. ಉದಾಹರಣೆಗೆ ಎಲ್ಲ ವಸ್ತುಗಳು ಇಂಪೋರ್ಟೆಡ್, ಅಥವಾ ಎಲ್ಲ ವಸ್ತುಗಳ ತಯಾರಿಕಾ ಘಟಕ ISO ಪ್ರಮಾಣಿತ, ಆಥವಾ ಎಲ್ಲ ವಸ್ತುಗಳು ಗುಡಿ ಕೈಗಾರಿಕೆಯ ಉತ್ಪನ್ನಗಳು, ಇತ್ಯಾದಿ.

ಜೋವಿಯಲ್ ಕಾರ್ಯನಿರ್ವಹಣಾ ಶೈಲಿ ಅಧ್ಬುತ. ಸಂಸ್ಥೆಯ ಬಹುಶಃ ಎಲ್ಲ ಸರ್ವರ್ ಗಳ IP ಅಡ್ರೆಸ್ ಬಾಯಿಪಾಠವಾಗಿತ್ತು. ಅಷ್ಟೆ ಅಲ್ಲದೆ ವಿವಿಧ ತಯಾರಿಕಾ, ಪ್ರಾಯೋಗಿಕ, ಪರೀಕ್ಷಾ ಹಾಗು ಉತ್ಪನ್ನ ಸರ್ವರ್ ಗಳ (developmental, experimental, testing, production ) credentials ( ಯೂಸರ್ ನೇಮ್ ಮತ್ತು ಪಾಸ್ವರ್ಡ್ ) ಅನ್ನೂ ಎಂದಿಗೂ ತಪ್ಪಾಗಿ ಟೈಪ್ ಮಾಡುತ್ತಿರಲಿಲ್ಲ.

ಹೀಗೆ ಚಿಂತಿಸುತ್ತ ಮಂತ್ರಮುಗ್ಧನಾಗಿದ್ದಾಗ ಯಾರೋ ಹಿಂಬದಿಯಿಂದ ನನ್ನ ಭುಜವನ್ನು ತಟ್ಟಿದಂತಾಯಿತು. PM ಪನ್ನೀರ್ ಸೆಲ್ವ !!! ಕಪ್ಪು ಚರ್ಮದ ಶೂ, ಅದೇ ಬಣ್ಣದ ಬೆಲ್ಟ್. ಬ್ರಾಂಡೆಡ್ ಶರ್ಟ್ ಜೇಬಿನಲ್ಲಿದ್ದ ಅತ್ಯಾಧುನಿಕ ಮಾದರಿಯ ಮೊಬೈಲ್ pulsating ಲೈಟ್ ಹೊರದೂಡ್ತಾ ಇತ್ತು. ಒಂದು Coprorate smile ಕೊಟ್ಟ. ಅಪಾಯದ ಛಾಯೆಯೊಂದಿಗೆ ಆಶ್ಚರ್ಯದಿಂದ ಅವನೆಡೆ ನೋಡಿದೆ. So whats the update ಅಂತ ಕೇಳಿದ. ya i'm half way thru, will update you soon ಅಂತ ಹೇಳಿ ಮಾತು ಮರೆಸಿ ಅವನನ್ನ ಇಲ್ಲಿಂದ ಸಾಗುಹಾಕಿದೆ. ತಕ್ಷಣ ೨ ಬಾರಿ Send/Receive ಬಟನ್ ಕ್ಲಿಕ್ ಮಾಡಿದಾಗ ಗೊತ್ತಾಯಿತು ನನ್ನ inbox ಸಂತೆ ತರಹ ಇದೆ ಅಂತ. e-mail ಗಳ ಸುರಿಮಳೆ. 12 Critical Bugs. ನನ್ನ ಶ್ವಾಸಕೋಶ ಬಾಯಿಗೆ ಬಂದಂತೆ ಭಾಸವಾಯಿತು. ತಂಪಾದ ಹವಾನಿಯಂತ್ರಕದ ಗಾಳಿಯೊಡನೆ ಈ ಮಾತು ನನ್ನ ಕಿವಿಗೆ ಬಿತ್ತು. Hey now the SMTP server is up. ನಿಧಾನವಾಗಿ ಛಾವಣಿಯ ಕಡೆ ಮುಖ ಮಾಡಿ ergonomic ಕುರ್ಚಿಯಲ್ಲಿ ಕುಸಿದುಬಿದ್ದೆ.


ಮತ್ತೆ ಅದೇ ಹೈ ಹ್ಯೀಲ್ಸ್ ಶಬ್ದ ನನ್ನಕಡೆಗೇ ಬರ್ತಾ ಇತ್ತು. ಜೋವಿಯಲ್ ಕೋಡೇಶ್ವರಿ ನನ್ನ ಕ್ಯುಬಿಕ್ಯಾಲ್ ಗೆ ಬಂದು Bye ಹೇಳಿ ಮನೆಗೆ ಹೊರಟಳು. ಆಗ ನನಗೆ key board ತೊಗೊಂಡು ತಲೆಗೆ ಚೆಚ್ಚಿಕೋಬೇಕು ಅಂತ ಅನ್ನಿಸುತ್ತಾ ಇತ್ತು.

Wednesday, July 23, 2008

ಯ೦ಕ್ಟಮ್ಮ

ಮಗ ಸ್ವಲ್ಪ ವರ್ಷಗಳ ಹಿಂದೆ ನಾನು 7 ನೇ class ಅಲ್ಲಿ ಇದ್ದೆ ಕಣ್ಲ. ಅದಕ್ಕೆ ಒಂದು ವರ್ಷದ ಹಿಂದೆ 6 ನೇ class ಅಲ್ಲೂ ಇದ್ದೆ ಕಣ್ಲ. ಅಲ್ಲಿ ಯೆಂಕ್ಟಮ್ಮನ ಪರಿಚಯ ಆಯಿತು ನೋಡು. ಯೆಂಕ್ಟಮ್ಮ ಬೇರೆ ಯಾರು ಅಲ್ಲ, ನಮಗೆ ಇಂಗ್ಲಿಷ್ ಪಾಠ ಮಾಡಕ್ಕೆ ಅಂತ ಕನ್ನಡ ಮೀಡಿಯಂ ಇಂದ ಸ್ಪೆಷಲ್ ಆಗಿ ಆಹ್ವಾನ ನೀಡಿದ್ದ ಒಂದು TCH passout. ಆಕೆ ಪ್ರಾಥಃಸ್ಮರಣೀಯಳು, ಯಾಕೆಂದರೆ ಅವಳ ಒಂದು ಚಟ ನಮಗೆಲ್ಲ ಪ್ರಾಣಸಂಕಟ. ಆ ಯಮ್ಮನಿಗೆ ಒಂದು ಸನಾತನ ರೋಗ ಇತ್ತು. ಅದೇನಪ್ಪ ಅಂದ್ರೆ, ಎಲ್ಲ ವಿದ್ಯಾರ್ಥಿಗಳಿಗೆ ಒಂದು standing instruction ಕೊಟ್ಟಿದ್ಲು. ನಾವೆಲ್ಲ ನಿತ್ಯಶಾಪಗ್ರಸ್ತರು. ಆ ಶಾಪಕ್ಕೆ ಪರಿಹಾರದ ಸಲುವಾಗಿ ಎಲ್ಲರ್ಗೂ ದಿನಂಪ್ರತಿ ಒಂದು common homework ಇತ್ತು. 10 ಪದಗಳಿಗೆ ಅರ್ಥ, 10 ಪದಗಳಿಗೆ ವಿರುದ್ದಾರ್ಥಕ ಶಬ್ದ, 10 ಪದಗಳಿಗೆ ಬಹುವಚನ ರೂಪ 10 ಪದಗಳಿಗೆ ಕನ್ನಡ ಅನುವಾದ ಬರೆದ್ಕೊಂಡ್ ಬರಬೇಕಾಗಿತ್ತು !!! ಸ್ವಲ್ಪ ಆದರು ಸಾಮಾನ್ಯ ಜ್ಞಾನ ಇದ್ಯ ಮಗ ಆ ಯಮ್ಮಂಗೆ? ಮಕ್ಕಳಿಗೆ ಅದು ಹೊರೆ ಆಗಲ್ವಾ? ಆ ಹೊರೆನ ಅವ್ರು ಅಸಡ್ಡೆ ರೂಪದಲ್ಲಿ ವ್ಯಕ್ತಪಡಿಸಲ್ವಾ? ದಿನಾ ಸಾಯುವವರಿಗೆ ಅಳೋರು ಯಾರು ಅಂತ ನಿಟ್ಟುಸಿರು ಬಿಡಲ್ವಾ? ತರಗತಿಯಲ್ಲಿ ಇದ್ದ ಕೆಲವು ಧೈರ್ಯಶಾಲಿಗಳು ಮಂಡು ಬಿದ್ದು ಒದೆ ತಿನಕ್ಕೆ ತಯಾರಿದ್ದರು. ಇನ್ನು ಕೆಲವು ಬುದ್ದಿವಂತರು ಹೇಗಾದರೂ ಚಾಕಚಕ್ಯತೆ ಇಂದ ನಿಭಾಯಿಸೋಣ ಅಂತ ನಿಶ್ಚಿಂತೆ ಇಂದ ಇದ್ದರು. ನನ್ನಂತಹ ಉಳಿದ ಕೆಲವು ನತದೃಶ್ಟ ಉತ್ತಮ ವಿದ್ಯಾರ್ಥಿಗಳು ಆಕೆಯ ಶಾಪಕ್ಕೆ ತುತ್ತಾಗಿ ವ್ಯಥೆ ಪಡ್ತಾಇದ್ವಿ. ಒಟ್ಟಿನಲ್ಲಿ ಹೇಳ್ಬೇಕು ಅಂದ್ರೆ ಎಲ್ಲರ ಮನಸ್ಸಿನಲ್ಲಿ ಚಂಡಿ ಚಾಮುಂಡಿಯಂತೆ ತನ್ನ ಚಿತ್ರಣ ಮೂಡ್ಸಿದ್ಲು.
ಒಂದ್ ದಿನ ಏನಾಯಿತು ಅಂದ್ರೆ, ನಿತ್ಯಕರ್ಮ ಯಾರ್ಯಾರು ಮಾಡಿಕೊಂಡು ಬಂದಿಲ್ವೋ, ಅದೇ ಮಗ daily homework 10101010 ಅವರ್ನೆಲ್ಲ ಹೊರಗೆ ಕಳಿಸಿಬಿಟ್ಳು. ಅವತ್ತು ನೋಟ್ಸ್ ಬರ್ಸೋ ದಿನ. ಆ ದಿನದ ವಿಶೇಷತೆ ಏನಂದ್ರೆ ಪಾಠದ ಕೊನೆಯಲ್ಲಿರುವ ಅಭ್ಯಾಸದ ಪ್ರಶ್ನೆಗಳಿಗೆ ಉತ್ತರ ಬರ್ಸೋ ದಿನ. ನಮ್ ಯೆಂಕ್ಟಮ್ಮನ ಸಹಾಯಕ್ಕೆ ಅಂತ ಯಾರೋ ಪುಣ್ಯಾತ್ಮ ಒಂದು ಗೈಡ್ ತಯಾರಿಸಿದ್ದ. ಆ ಗೈಡ್ ನ ಯೆತ್ತುಚ್ಚೆಹೊಯಿದಂಗೆ ಓದಿಕೊಂಡು ಹೋಗೋಳು. ನಟದ್ರುಷ್ಟ ವಿದ್ಯಾರ್ಥಿಗಳೆಲ್ಲ ಬರ್ಕೊಬೇಕು. ಆ rough ನ ಪರಿಷ್ಕರಿಸಿ ಮರುದಿನ ನೀಟಾಗಿ ನೋಟ್ಸ್ ಅಂತ ಮಾಡಿ, ನಿತ್ಯಕರಮದ್ ಜೊತೆ ನೂತನ ಕರ್ಮಕ್ಕೆ ಶರಣಾಗಬೇಕು. ಈ ಮಧ್ಯೆ ಸಭಾತ್ಯಾಗ ಮಾಡಿದ ವಿದ್ಯಾರ್ಥಿಗಳಿಗೆ ಯಂಕ್ಟಮ್ಮ ಬರೆಸಿದ ನೋಟ್ಸ್ ಕೊಡುವಂತಿಲ್ಲ. ಇಷ್ಟಾದರೂ ಬಹಿಷ್ಕ್ರುತರು ಹೇಗಾದ್ರು ಮಾಡಿ ಮರುದಿನ ನೋಟ್ಸ್ ತರಲೇಬೇಕು. ಅದ್ರುಸ್ಟವಶಾತ್ ಒಬ್ಬ ಹುಡ್ಗ ಈ ಎರಡೂ ಕಟ್ಟಳೆಗಳನ್ನು ಮುರಿದು ವಿಜಯಶಾಲಿಯಾಗಿ ಹೊರಹೊಮ್ಮಿದ. ಆಗ ಯಂಕ್ಟಮ್ಮ೦ಗೆ ದುಃಖ ಮತ್ತು ಆಶ್ಚರ್ಯ ಒಮ್ಮೆಲೆಗೆ ಆಯಿತು. ಅವನನ್ನ ಪ್ರಶ್ನಿಸಿದಾಗ ಗೊತ್ತಾಯಿತು, ಅವನ ಸಹೋದರಿ ಯಂಕ್ಟಮ್ಮನ ಹಳೆಯ ಶಿಷ್ಯೆ. ಆಕೆಯ ನೋಟ್ಸ್ ನಕಲು ಮಾಡಿ ತಂದಿದ್ದ. ಕೊನೆಗೆ ತನ್ನ ಸೋಲು ಒಪ್ಪಿಕೊಂಡಳು.

How stupid ಅಲ್ವಾ ಮಗ? ಇಲ್ಲಿ ಗಮನಿಸಬೇಕಾಗಿರೋ ಅಂಶ ಅಂದ್ರೆ "ನಾನಿಲ್ಲದೆ ಸೂರ್ಯನೇ ಹುಟ್ಟಲ್ಲ ಅನ್ನೋ ಮನೋಭಾವ ", "ಕಿರಿಯರ ಮುಘ್ದತೆಯ ಶೋಷಣೆ" ಇತ್ಯಾದಿ. ಇವೆಲ್ಲ ಅವಳ ಉದ್ದೇಶವಲ್ಲದೆ ಇರಬಹುದು, ಆದರೆ ಇದು ಅವಳ ಶಿಕ್ಷಣದ ಗುಣಮಟ್ಟ, ಅವಳ ಮೌಢ್ಯದ ಪ್ರತಿಭಿಂಬ, ತಿಳುವಳಿಕೆಯ ಕೊರತೆ, ಅಜ್ಞಾನದ ಪರಮಾವದಿ.

ಏನಪ್ಪಾ ಇವನು ಯ೦ಕ್ಟಮ್ಮನ ಜನ್ಮ ಜಾಲಾಡ್ತಾ ಇದಾನೆ ಅಂತ ಅನ್ಕೊಬೇಡ ಮಗ, ಬಹಳ ದುಃಖದಿಂದ ಹೇಳ್ತೀನಿ, ಇಂತಹವರಿಂದ ಪಾಠಕಲಿತ ನಾನು ಜೀವನದಲ್ಲಿ ಹೇಗೆ ಉದ್ದಾರ ಆಗಕ್ಕೆ ಸಾಧ್ಯ ನೀನೆ ಹೇಳು? ಪರಿಸ್ಥಿತಿ ಹೀಗಿರುವಾಗ ನಾನು ಕಿಲಿಮಂಜಾರೋ ಇರಲಿ, ಸಿದ್ದಗಂಗೆ ಬೆಟ್ಟ ಹತ್ತುತಿನೋ ಇಲ್ಲವೋ ...

Tuesday, July 22, 2008

ನಿಹಾರಿಕೆ

"ನನಗೆ ಪರಿಪೂರ್ಣವಾದ ನೈತಿಕ ಮತ್ತು ಮೌಲ್ಯಗಳ ಅಸ್ತಿತ್ವದಬಗ್ಗೆ ಅನುಮಾನವಿದೆ. ಏಕೆಂದರೆ ಒಳಿತು ಮತ್ತು ಕೆಡುಕು ಎಂಬುದೆ ಅಸ್ಪಸ್ಟವಾದ ನಿಹಾರಿಕೆ, ಅದನ್ನು ಉದ್ದೇಶಿಸುವ ಮೌಲ್ಯಗಳು, ಸಾಮಾಜಿಕ ಮತ್ತು ಭಾವನಾತ್ಮಕ ಒತ್ತಡಗಳ ಗುಣಲಬ್ಧವಲ್ಲದೆ ಬೇರೇನೂ ಅಲ್ಲ." ಅನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಆದರೂ ಈ ಆಲೋಚನೆ ನನ್ನ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಭೀರಿದೆ. ಇದಕ್ಕೆ ಕಾರಣ ನನ್ನಲ್ಲಿರುವ ಅನುಮಾನ, ಅಲ್ಪಜ್ಞಾನ, ಅಜ್ಞಾನ.

ಮಗ ಬೇಜಾರ್ ಮಾಡ್ಕೋಬೇಡ, ಏನಪ್ಪಾ ಬೆಳ್ಬೆಳಿಗ್ಗೇನೆ ಕೊರಿತಾಯಿದಾನೆ ಅಂತ, ಇದು ಒಂದು ಪ್ರಮುಖವಾದ ವಿಷಯ.

ನೋಡು ಮಗ, ನಿರ್ಧಿಷ್ಠತೆಯ ಶೂನ್ಯತೆ ಅನುಮಾನಕ್ಕೆ ಆಸ್ಪದ ಮಾಡಿಕೊಡತ್ತೆ ಹೊರತು ಪರಿಸಮಾಪ್ತಿಗಲ್ಲ. ನಾನು ಒಪ್ಪಿಕೊಳ್ಳ್ತಿನಿ, ಎಲ್ಲ ವಿಷಯಕ್ಕೂ ಇಥಿಶ್ರೀ ಹೇಳಕ್ಕಾಗಲ್ಲ. ಹಾಗಂದ ಮಾತ್ರಕ್ಕೆ ಅವೆಲ್ಲ ಪರಿಸ್ಥಿತಿಯ ಒತ್ತಡ ಅಂತ ಹೇಳಿದ್ರೆ ಅದು ಸಂಧಿದ್ಗ್ಧತೆ ತೋರಿಸತ್ತೆ. ಆದಾಗ್ಯೂ ಭಾವನಾತ್ಮಕ ಒತ್ತಡದ ಬಗ್ಗೆ ನನ್ನ ಒಮ್ಮತ ಇದೆ. ಭಾವನೆಗಳಿಗೆ ಬೆಳೆಕೊದುವುದರಿಂದ ನಾವು ಕೆಲವು ಕೆಲಸಗಳನ್ನು ಮಾಡೋದಕ್ಕೆ ಹಿಂಜರಿತೀವಿ. ಒಂದು ಸ್ವಾರಸ್ಯ ವಿಷ್ಯ ಹೇಳ್ತಿನಿ ಕೇಳು. ನಾನು ಇಂಜಿನಿಯರಿಂಗ್ ಅಲ್ಲಿ ಒಂದು ವಿಷ್ಯ ಕಲಿತಿದ್ದೆ. ಅದು ತಂತ್ರಜ್ಞಾನಕ್ಕೆ ಯಾವರೀತಿಯಲ್ಲೂ ಸಂಭಂದಿಸಿಲ್ಲ. ಆದರೆ ಅದು ಜೀವನಕ್ಕೆ ತಾಂತ್ರಿಕತೆಗಿಂತ ಅತ್ಯಗತ್ತವಾದ ಮುಲ್ಯಗಳನ್ನ ರೂಪಿಸುವುದರಲ್ಲಿ ಸಹಾಯಮಾಡುವಂತದ್ದು. ಅದೇನಪ್ಪ ಅಂದ್ರೆ, ಒಂದು ಕಾಯಕದ ನೈತಿಕತೆ ಹೇಗೆ ಕಂಡುಹಿಡಿಯುವುದು? ... ನಿಮ್ಮ ಯೋಜನೆ ಬಗ್ಗೆ ನೀವು ನಿಮ್ಮ ಅಮ್ಮನ ಮುಂದೆ ಧೈರ್ಯವಾಗಿ ಹೇಳಲು ಸಿದ್ದ ಇದ್ರೆ ಅದು ಸ್ವಲ್ಪಮಟ್ಟಿಗೆ ನೈತಿಕ, ನಿಮ್ಮ ಯೋಜನೆಯ ಬಗ್ಗೆ ವೇದಿಕೆಯಲ್ಲಿ ನಿಂತು ಐದು ನಿಮಿಷ ಮಾತಾಡಲು ಶಕ್ತರಾಗಿದ್ದಾರೆ ಅದು ಮತ್ತಸ್ಟು ನೈತಿಕ. ಇದ್ಯಾವುದರ ಸಹಾಯವಿಲ್ಲದೆ ಆತ್ಮಾವಲೋಕನದಿಂದ ನೈತಿಕತೆ ನಿರ್ಧಾರ ಕೈಗೊಳ್ಳುವುದು ಸುಲಭ. ಅದು ಹೇಗೆ ? ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳುವುದು. ಒಂದೇ ಪ್ರಶ್ನೆ. ಇತರನ್ನು ಕುರಿತ ನಮ್ಮ ಧೋರಣೆ ಬಗ್ಗೆ ಒಂದು ಚಿಂತನೆ. ಅಂದ್ರೆ ನಮ್ಮನ್ನು ಕುರಿತು ಇದೇ ಧೋರಣೆ ಇತರರು ತಾಳಿದರೆ ನಾವು ಸಹಿಸಿಕೊಳ್ಳುತ್ತೀವಾ?

ನೋಡು ಮಗ !!! ನಾನು ಈ ಪದ್ದತಿನ ಸ್ವಲ್ಪ ಮಟ್ಟಿಗೆ ಪಾಲಿಸ್ತಾ ಇದ್ದೆ. ನೀನ್ ನಂಬಿದ್ರೆ ನಂಬು ಬಿಟ್ಟರೆ ಬಿಡು. ಕಿಲಿಮಂಜರೋ ಶೃಂಗ ತಲುಪುವವರೆಗೂ ಪಾಲಿಸಕ್ಕೆ ಪ್ರಯತ್ನ ಮಾಡ್ತೀನಿ ಅಂತ ಭರವಸೆ ಕೊಡ್ತಿನಿ. ಸಾಧ್ಯವಾದರೆ ನೀನು ನನ್ನೊಡನೆ ಹೆಜ್ಜೆ ಹಾಕು. ನಿಹಾರಿಕೆಯನ್ನು ಚದುರಿಸು.