Monday, July 20, 2009

ಕಾರ್ಪೊರೇಟ್ ಸೂರ್ಯ

ಹುಣ್ಣಿಮೆಯ ಚಂದಿರನು ಕಳೆಬರದಂದದಿ ಕಡಲಲೆಗಳ ಮೇಲೆ ತೇಲುತಿರಲು
ಅಂತರಾಳದ ದುಃಖ ಉಕ್ಕಿ ಹರಿವ ಹೊನಲು
ಭೋರ್ಗರೆವ ಸಮುದ್ರದಲೆಗಳ ರುದ್ರತಾಂಡವ ತುಳಿತದಲಿ
ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿ ಮಾಯವಾಗುವ ನಿರಾಸಕ್ತಿಯ ಚುಕ್ಕಿಗಳು

ಕಡಲ ಒಡಲಿಂದಲೆಗಳು ದಡಕೆ ನನ್ನೆಡೆಗೆ ಆದರದಿ ಬರುತಿರಲು
ದುಃಖದಿಂದೊಮ್ಮೆಲೆಗೆ ಕ್ಷಣಿಕ ಮುಗುಳುನಗೆಯು
ಮರುಕ್ಷಣವೇ ಹಿಂದಿರುಗಿದಲೆಗಳು ಜಲರಾಶಿಯೆಡೆ ಮುಖಮಾಡಿ
ಪ್ರಭಾವಳಿಯಂತಿರುವ ಸುಖದ ಮಧ್ಯದಲಿ ಮತ್ತೆ ಮೌನ ದುಗುಡವು

ಒಮ್ಮಿಂದೊಮ್ಮೆಲೆಲ್ಲೆಡೆಯು ಅಜ್ಞಾನದಂದಕಾರವು ಆವರಿಸಲು
ದಾರಿಕಾಣದೆ ನೊಂದು ಬೇಸತ್ತ ಮನವು
ದೂರದಲ್ಲೊಮ್ಮೆ ಗೋಚರಿಸಿದ ಕಿಡಿಯ ಹಿಡಿಯಲು ಹೋಗಿ
ಗಾದೆಮಾತಿನ ಸತ್ಯಾಂಶದರಿವಾಗಿ ಅಲ್ಲೊಮ್ಮೆ ಪುನಃ ಸೋಲು

ಸೋಲು ಗೆಲುವಿನ ಸೋಪಾನ, ಸೋತವನೇ ನಿಜವಾದ ವಿಜೇತ
ಸೋತವನೇ ಬಲ್ಲವನು ಪ್ರಪಂಚದ ವಿಸ್ತೀರ್ಣವನು
ಎಂದು ನಿಟ್ಟುಸಿರು ಬಿಟ್ಟು ದಿಟ್ಟ ಹೆಜ್ಜೆಯನಿಟ್ಟು ಕಳೆಬರವನೊಮ್ಮೆ
ಈಕ್ಷಿಸಲರಿವಾಯಿತದು ಉಡುರಾಜನಲ್ಲ ರವಿತೇಜನೆಂದು

No comments: