Friday, July 17, 2009

ಕಾರ್ಪೊರೇಟ್ ಖದೀಮರು

ಮೊದಲದಿನ ಕಾತುರದಿ ಎಲ್ಲರಿಂದಾಗಮನ
ಕುಲುಕುವರು ಕೈಗಳನು ಮುಗುಳುನಗೆ ಬೀರುತಲಿ
ಸ್ವಾಗತವು ಆದರದಿ ಹವೆಯೂ ನಿಯಂತ್ರಿತ
ಸಿಲುಕಿಸಲು ಸಿಹಿಯೊಡನೆ ಸರಳ ಬಂಧನವದು ಸ್ಥಿರ

ಆಸನವೋ ಸಿಂಹಾಸನವೋ ರಾಜಯೋಗವೋ ಒಳಗೆ
ಕತ್ತಲಲಿ ಮಿಂಚುಹುಳವು ಮಿನುಗುವಂದದಿ ದೀಪ
ಶುಭ್ರ ಕನ್ನಡಿಯಂತೆ ಚಿಲುಮೆ ಶೌಚಾಲಯವು
ಸ್ವಚಾಲಿತ ಮೆಟ್ಟಿಲುಗಳು ಹತ್ತು ಇಳಿವುದು ಬೇಡ

ಅಪರಾನ್ಹ ಭೋಜನದಿ ವಿವಿಧ ಭಕ್ಷಗಳೇನು
ಭಾರತವು ಒಂದೆಂದು ದಕ್ಷಿಣೋತ್ತರದಡಿಗೆ
ಸಂಜೆ ಎಂಬುದೆ ತಡವು ಪಾನಗಳು ಕಾದಿಹವು
ಕತ್ತಲಾಯಿತು ಈಗ ಮನೆಗುಂಟ ವಾಹನವು

ದಿನಗಳುರುಳಿತು ಹೀಗೆ ದಿಷೆಯು ತಿರುಗಿತು ಹಾಗೆ
ಒತ್ತಡವು ಒಂದೆಡೆಯು ಉಳಿದೆಲ್ಲ ಗುಟ್ಟು ಗುಮ್ಮಾನಗಳು
ಹಗೆಯ ಹೊಗೆಯಲ್ಲೀಗ ಬಹುಕಷ್ಟ ಉಸಿರಾಟ
ಕೊನೆಗೂ ಕಾರಿದ ಕೆಂಡವದು ಎಂದೂ ನಂದದ ಜ್ವಾಲೆ

ದೊಡ್ಡ ತಲೆಗಳು ಸೇರಿ ಒಟ್ಟಾಗಿ ಕೋಣೆಯಲಿ
ಬೆರಳೆಲ್ಲ ಕುರಿಯೆಡೆಗೆ ಅಲ್ಲಿ ಬಲಿಪಶುವಿನ ಹೆಸರೇ
ಕಡೆಯ ಪಗಾರ ಚೇಟಿಗದು ನಾಂದಿಯಾಯಿತು ದಿನವು
ಕೃತಕ ಮಾತಿನಲಿ ಸಮಾಧಾನ ಕಡೆಗೂ ಮುಗುಳುನಗೆಯಲಿ ವಿಧಾಯ

No comments: