Wednesday, July 30, 2008

ಮೋಜಿನ ಹಿಂಸೆ

"ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ" ಅಂತ ಕೇಳಿದ್ದೀವಿ ಆದರೆ ಅದರ ಅರ್ಥ ಮನವರಿಕೆ ಆಗಿರಲಿಲ್ಲ. ಬಾಲ್ಯದ ಅಜ್ಞಾನ ಮೋಜಿನ ನೆಪವೊಡ್ಡಿ ಕೀಟ ಜಗತ್ತಿಗೆ ಬಹಳ ಹಿಂಸೆ ಮಾಡಿದ್ವಿ. ಹಿರಿಯರಿಂದಲೂ ಕೆಲವು ಹಿಂಸೆಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ಇತ್ತು. ಉದಾಹರಣೆಗೆ ಖಾದ್ಯ ಪದಾರ್ಥಗಳಲ್ಲಿ ಇರುವೆ ಇದ್ದರೆ ಅದನ್ನ ಬಿಸಿಲಲ್ಲಿ ಇಟ್ಟು ಹಿಂಸಿಸುವುದು, ಜಿರಳೆಗಳನ್ನು ಪೊರಕೆ ಇಂದ ಹೊಡೆದು ಸಾಯಿಸುವುದು ಅಥವಾ ವಿಷಲೆಪಿತ ಸಕ್ಕರೆಯನ್ನ ಕೀಟನಾಶಕದಂತೆ ಉಪಯೋಗಿಸುವುದು, ಇಲಿಗಳಿಗೂ ಇದೇ ರೀತಿ ಮೃತ್ಯುವಿಗೆ ಆಹ್ವಾನ ನೀಡುವುದು. ಜೇಡರ ಹುಳಕ್ಕಂತೂ ಉಳಿಗಾಲವಿಲ್ಲ. ಸೊಳ್ಳೆಗಳಿಗೆ ನಿರ್ದಾಕ್ಕ್ಷಿಣ್ಯ ವಧೆ, ಕಂಡಲ್ಲಿ ಗುಂಡು. ಇವೆಲ್ಲಕ್ಕೂ ತನ್ನದೇ ಆದ ಸಮರ್ಥನೆ. ನಮ್ಮ ಮನೆಯಲ್ಲೇ ಇದ್ದು, ನಮಗೆ ತೊಂದರೆ ಕೊಡುತ್ತೆ ಅನ್ನೋ ನೆವ.

ತನ್ಮುಖೇಣ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಹಿಂಸೆಯ ಬೀಜ ಬಿತ್ತುವುದು. ಹೀಗಾಗಿ ಅವರಿಗೆ ಅಹಿಂಸೆಯ ಮಹತ್ವದ ಪರಿಚಯವನ್ನೇ ಮಾಡಿಸಲ್ಲ. ಹಿಂಸೆಯನ್ನು 'ನಮ್ಮ ತೊಂದರೆಯ ನಿವಾರಣೆಗಾಗಿ' ಮಾಡಿದರೇನು ಅಥವಾ 'ಮೊಜಿಗೆ' ಮಾಡಿದರೇನು? ಒಟ್ಟಿನಲ್ಲಿ ಹಿಂಸೆಗೆ ವಿರೋಧವಿಲ್ಲ ಎಂಬ ಭಾವನೆಯಿಂದ, ನಮಗೆ ಒಂದಿಷ್ಟೂ ತೊಂದರೆ ಕೊಡದ ಜೀವ ಸ೦ಕುಲವನ್ನೂ ಪೀಡಿಸುತ್ತಾ ಇದ್ವಿ.

ಭೂತ ಕನ್ನಡಿಯ ದುರುಪಯೋಗ ಮಾಡಿ ಸೂರ್ಯನ ಬೆಳಕನ್ನು ಒಂದು ಬಿಂದುವಾಗಿ ಕೇಂದ್ರೀಕರಿಸಿ ಅದನ್ನ ಇರುವೆ ಮೇಲೆ ಬಿಡುತ್ತಿದ್ದೆವು. ಬಣ್ಣದ ಚಿಟ್ಟೆಗಳನ್ನು ಹಿಡಿಯುತ್ತಿದ್ದೆವು. ದೊಡ್ಡ ಚಿಟ್ಟೆಗಳು ಇಲ್ಲದ ಋತುವಿನಲ್ಲಿ, ಹುಲ್ಲಿನ ಮೇಲೆ ಹಾರಾಡುವ ಚಿಕ್ಕ ಚಿಟ್ಟೆಗಳು ಬಲಿಯಾಗುತ್ತಿತ್ತು. Dragonfly (ಏರೋಪ್ಲೇನ್ ಚಿಟ್ಟೆ)ಗೆ ವಿಧ ವಿಧವಾದ ಚಿತ್ರಹಿಂಸೆ. ಅದರ ಬಾಲಕ್ಕೆ ದಾರ ಕಟ್ಟಿ ಹಾರಿಸುವುದು. ಒಂದೇ ದಾರದ ಇಬ್ಬದಿಗೆ ಎರಡು ಚಿಟ್ಟೆಗಳನ್ನು ಕಟ್ಟಿ ಅವುಗಳ ಅಸಹಾಯಕತೆ ಕಂಡು ನಲಿದಾಡುವುದು. ಹಾರಾಡುವ ಚಿಟ್ಟೆಗಳಿಗೆ ಪರ್ಥೇನಿಯ೦ ಗಿಡದಿಂದ ಹೊಡೆದು ನೆಲಕ್ಕುರುಳಿಸುವುದು. ಅವುಗಳ ಸೂಕ್ಷ್ಮ ರೆಕ್ಕೆಗಳನ್ನು ಹಿಡಿದು ಸೊಳ್ಳೆಗಳನ್ನು ತಿನ್ನುಸುವುದು !!! ಜೀರ್ಜಿಂಬೆ (ಬೋರಂಗಿ) ಹುಳನ ಬೆಂಕಿಪೋಟ್ಟಣದಲ್ಲಿಟ್ಟು ಸಾಕುವ ನೆಪದಲ್ಲಿ ಸಾಯಿಸುವುದು. ಮಳೆಗಾಲದಲ್ಲಿ ಭೂಮಿಯಿಂದ ಹೊರಬರುವ ಕೆಂಪು ಬಣ್ಣದ ವೆಲ್ವೆಟ್ ಹುಳಗಳನ್ನೂ ಬೆಂಕಿಪೊಟ್ಟಣದಲ್ಲಿ ಹಾಕಿ ಜೊತೆಗೆ ಹುಲ್ಲಿನ ಹಾಸಿಗೆ ಮಾಡಿ ವಾತಾಯನ ವ್ಯವಸ್ಥೆಗೆ ಮೇಲೊಂದು ರಂದ್ರ ಮಾಡಿ ಇಡುತ್ತಿದ್ದೆವು. ಅವುಗಳಿಗೆ ಓಟದ ಪಂದ್ಯ ಆಯೋಜನೆ ಖುಷಿ ತರುತ್ತಿತ್ತು. ಆದರೆ ಮರುದಿನ ಎಲ್ಲವು ಡೆಡ್. ಮಿಡತೆ, ದುಂಬಿ ಇತ್ಯಾದಿ ಮನೆಯೊಳಗೆ ಬಂದರೆ ರೊಟ್ಟು (card board) ಇಂದ ಹೊಡೆದು ಹೊರಗಟ್ಟುತ್ತಿದ್ದೆವು. ಒತೆಕ್ಯಾತಗಳನ್ನು ಗುರಿ ಅಭ್ಯಾಸಕ್ಕಾಗಿ ( target practice)ಉಪಯೋಗಿಸುತ್ತಿದ್ದೆವು. ಅವುಗಳ ಬೆನ್ನಟ್ಟಿ ಕಲ್ಲಿನಿಂದ ಹೊಡೆದು ಸಾಯಿಸುವುದು.

ಒಂದು ವಿಪರ್ಯಾಸವೆಂದರೆ ಭಯಾನಕ ಹುಳಗಳಾದ ಖಣಜ, ಹೆಜ್ಜೇನು, ಗೊದ್ದ(ದಪ್ಪ ಇರುವೆ) ಇವುಗಳನ್ನು ಕುರಿತು ಕಾಲಕಾಲಕ್ಕೆ ಹಿರಿಯರಿಂದ ಮುನ್ನೆಚ್ಚರಿಕೆ ಸಿಗುತ್ತಿತ್ತು. ಕಾರಣ? ಅವುಗಳಿಂದ ನಮಗೆ ಭಾದೆಯಾಗುತ್ತದೆ ಅಂತ. ಭಾದೆ ಎಲ್ಲರಿಗೂ ಒಂದೇ ಅಲ್ವಾ?

ಮೊನ್ನೆ ಏನಾಯಿತು ಗೊತ್ತ? ... ಸೇವೆಯಿಂದ ನಿವೃತ್ತ ಆಗಿರುವ ಒಬ್ಬ ಮುದುಕ, ಮನೆಯಲ್ಲಿದ್ದ ತ್ಯಾಜ್ಯ ರವೆಯನ್ನು ರಸ್ತೆ ಬದಿಯ ಇರುವೆ ಗೂಡುಗಳ ಪಕ್ಕದಲ್ಲಿ ಚೆಲ್ಲುತ್ತಿದ್ದ. ನಾನು ಅವನನ್ನು ಒಮ್ಮೆ ವ್ಯಂಗ್ಯ ದೃಷ್ಟಿಯಿಂದ ನೋಡಿದೆ. ಎಲ್ಲ ಜೀವಿಗಳಿಗೂ ಅದರ ಆಹಾರ ಹೇಗೆ ಹುಡುಕಬೇಕು ಅಂತ ಗೊತ್ತಿರತ್ತೆ. ಆಹಾರ ಅದರ ಬಾಯಿಗೆ ತುರುಕುವ ಅವಶ್ಯಕತೆ ಇಲ್ಲ. ಬದಲಿ ಆ ಮುದುಕ ತನ್ನ ಸಮಯವನ್ನು ಜನಜಾಗೃತಿಗೆ ಬಳಸಿ ತನ್ನ ಮನೆಯಲ್ಲಿರುವ ಬಾಲಕರಿಗೆ, ಅವರ ಸ್ನೇಹಿತರಿಗೆ ಅಹಿಂಸೆಯ ಮಹತ್ವವನ್ನು ತಿಳಿಸಿ, ಮಕ್ಕಳ ಮನಸ್ಸು ನಾಟುವಂತೆ ಇವನ್ನೆಲ್ಲ ಕಥೆಯ ರೂಪದಲ್ಲಿ ಹೇಳಿ ಮನವರಿಕೆ ಮಾಡಿಸಿ, "ನೀವು ಬಾಳಿ, ಬದುಕಲೂ ಬಿಡಿ" ಸಿದ್ಧಾಂತದ ಸೂಕ್ಷ್ಮತೆಯನ್ನು ತಿಳಿಹೇಳಬಹುದು. ಈ ಸಿದ್ದಾಂತದ ಬುನಾದಿಯಲ್ಲಿ ಬೆಳೆದ ಬಾಲಕರು ಮುಂದೆ ಉತ್ತಮ ಪ್ರಜೆಗಲಾಗುವ ಸಾಧ್ಯತೆಗಳು ಹೆಚ್ಚಾಗಿರತ್ತೆ.

ನೋಡು ಶಿಷ್ಯ ನಿನಗಂತೂ ಮನುಷ್ಯತ್ವ ಇಲ್ಲ, ನೀನು ಬುಲ್ ಡಾಗ್. ಮನುಷ್ಯತ್ವ ಇರುವವರು ಈ ರೀತಿ ಅಮಾಯಕ ಜೀವಿಗಳನ್ನು ಹಿಂಸಿಸಬಾರದು ಅಷ್ಟೆ.

No comments: